ರಾಜರಾಜಚೋಳ

ಆಳ್ವಿಕೆ 985-1014. ಚೋಳರ ಪ್ರಸಿದ್ಧ ದೊರೆ. ಇಮ್ಮಡಿ ಪರಾಂತಕ ಸುಂದರಚೋಳ ಮತ್ತು ವಾನವನ್ ಮಹಾದೇವಿ ಇವರ ದ್ವಿತೀಯ ಪುತ್ರ. ಈತನ ಹೆಸರು ರಾಜಕೇಸರಿ ಆರುಮೋಳಿವರ್ಮ, ರಾಜರಾಜನೆಂಬ ಹೆಸರಿನಿಂದ ಪಟ್ಟಕ್ಕೆ ಬಂದ. ಚೋಳರ ರಾಜಕೀಯ ಇತಿಹಾಸದಲ್ಲಿ ಮಹತ್ತರ ಬದಲಾವಣೆಗೆ ನಾಂದಿಹಾಕಿದ. ಉತ್ತಮ ಚೋಳನ ಅನಂತರ ರಾಜ್ಯದಲ್ಲಿ ಉಂಟಾಗಿದ್ದ ಅರಾಜಕತೆಯನ್ನು ಕೊನೆಗಾಣಿಸಿದ. ಸು. 30 ವರ್ಷಗಳ ಕಾಲ ಚೋಳ ರಾಜ್ಯವನ್ನು ಆಳಿ ಅತ್ಯಂತ ಸಮರ್ಥ ದೊರೆ ಎನಿಸಿದ. ಇವನ ಆಳ್ವಿಕೆಯಿಂದ ಚೋಳರ ಖ್ಯಾತಿ ಮತ್ತು ಪ್ರಬಲ ಹೆಚ್ಚಿತು. ತನ್ನ ಶಕ್ತಿಸಾಮಥ್ರ್ಯಗಳಿಂದ ಒಂದು ಸಣ್ಣ ರಾಜ್ಯವನ್ನು ವಿಶಾಲವಾದ ಮತ್ತು ಸುವ್ಯವಸ್ಥಿತವಾದ ಸಾಮ್ರಾಜ್ಯವನ್ನಾಗಿ ರೂಪಿಸಿ, ಚೋಳ ಸಾಮ್ರಾಜ್ಯದ ನಿಜವಾದ ಶಿಲ್ಪಿ ಎನಿಸಿಕೊಂಡ.

ಸಾಹಸಿ ಮತ್ತು ಮಹತ್ತ್ವಾಕಾಂಕ್ಷಿಯಾದ ಈತ ಪ್ರಬಲ ಸೈನ್ಯ ಮತ್ತು ನೌಕಾಪಡೆಯನ್ನು ಸಜ್ಜುಗೊಳಿಸಿ, ಸಾಮ್ರಾಜ್ಯ ವಿಸ್ತಾರ ಕಾರ್ಯದಲ್ಲಿ ತೊಡಗಿದ. ಮೊದಲ ಚೇರ, ಪಾಂಡ್ಯ ಮತ್ತು ಸಿಂಹಳರಾಜರನ್ನು ಛಿದ್ರಗೊಳಿಸುವುದರ ಮೂಲಕ ತನ್ನ ದಿಗ್ವಿಜಯಗಳನ್ನು ಪ್ರಾರಂಭಿಸಿದ. ಪ್ರಸಿದ್ಧ ಕಂಡಲುಶಾಲ ಎಂಬ ಬಂದರಿನಲ್ಲಿ ಚೇರರ ಸುಸಜ್ಜಿತ ನೌಕಾಪಡೆಗಳನ್ನು ನಾಶಪಡಿಸಿ, ಅದನ್ನು ವಶಪಡಿಸಿಕೊಂಡ. ಕೇರಳದ ಭಾಸ್ಕರವರ್ಮ ತನ್ನ ಸೋಲನ್ನು ಒಪ್ಪಿಕೊಂಡು ರಾಜರಾಜನ ಅಧೀನಕ್ಕೊಳಪಟ್ಟ. ಈ ಯುದ್ಧದಲ್ಲಿ ಜಯಗಳಿಸಿದುದಕ್ಕಾಗಿ ರಾಜರಾಜ ಕಾನ್ದಳೂರ್ಶಾಲೈಕ್ಕಳಮರುತ ಎಂಬ ಬಿರುದು ಪಡೆದ. ಅನಂತರ ಮಧುರೆಯ ಪಾಂಡ್ಯರಾಜ ಅಮರಭುಜಂಗನನ್ನು ಸೋಲಿಸಿ, ಅವನು ತನ್ನ ಅಧಿಪತ್ಯವನ್ನು ಒಪ್ಪಿಕೊಳ್ಳುವಂತೆ ಮಾಡಿದ. ಚೇರ ಮತ್ತು ಪಾಂಡ್ಯ ರಾಜ್ಯಗಳನ್ನು ಗೆದ್ದು, ಅವುಗಳನ್ನು ಚೋಳರಾಜ್ಯದ ಅಧೀನಕ್ಕೆ ಒಳಪಡಿಸಿದುದರಿಂದ ರಾಜರಾಜನಿಗೆ ಮುಮ್ಮಡಿ ಚೋಳ ಎಂದು ಕರೆಯಲಾಗುತ್ತಿತ್ತು. ಚೇರರನ್ನು ಸೋಲಿಸಿ, ಕೇರಳದ ತೀರಪ್ರದೇಶಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಸಮುದ್ರ ವ್ಯಾಪಾರದ ಪ್ರಾಮುಖ್ಯವನ್ನು ಅರಿತ ರಾಜರಾಜ ಸಿಂಹಳ ಮತ್ತು ಮಾಲ್ಡೀವ್ ದ್ವೀಪಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ. ದಕ್ಷ ನೌಕಾಪಡೆಯೊಂದಿಗೆ ಸಿಂಹಳ ದ್ವೀಪದ ಮೇಲೆ ದಂಡೆತ್ತಿ ಹೋಗಿ, ಅಲ್ಲಿಯ ರಾಜ ಐದನೆಯ ಮಹಿಂದನನ್ನು ಸೋಲಿಸಿ, ಉತ್ತರ ಭಾಗಗಳನ್ನು ವಶಪಡಿಸಿಕೊಂಡ. ಈ ಪ್ರದೇಶಗಳಿಗೆ ಮುಮ್ಮಡಿ ಚೋಳಮಂಡಲ ಎಂದೇ ಕರೆಯಲಾಯಿತು. ಈ ದಂಡಯಾತ್ರೆಯ ವೇಳೆಯಲ್ಲಿ ಸಿಂಹಳದ ಮುಖ್ಯ ಪಟ್ಟಣವಾಗಿದ್ದ ಅನುರಾಧಪುರವನ್ನು ನೆಲಸಮಗೊಳಿಸಿ ಚೊಳನ್ನರವ ಎಂಬ ಹೊಸ ಪಟ್ಟಣವನ್ನು ಸ್ಥಾಪಿಸಿ, ಅದನ್ನೇ ಚೋಳರಾಜ್ಯದ ರಾಜಧಾನಿಯಾಗಿ ಮಾಡಿಕೊಂಡ. ಇದಕ್ಕೆ ಜನನಾಥಮಂಗಲ ಎಂಬ ಹೊಸ ಹೆಸರನ್ನು ಕೊಡಲಾಯಿತು. ತನ್ನ ವಿಜಯದ ನೆನಪಿಗಾಗಿ ಅಲ್ಲಿ ಶಿವದೇವಾಲಯವೊಂದನ್ನು ನಿರ್ಮಿಸಿದ.

ಹೀಗೆ ತನ್ನ ಸಾಧನೆಗಳನ್ನು ಮುಂದುವರೆಸಿದ ರಾಜರಾಜನ ದೃಷ್ಟಿ ಕರ್ನಾಟಕದ ಕಡೆ ಹರಿಯಿತು. ಮೊದಲು ತಲಕಾಡಿನ ಗಂಗರನ್ನು ಬಗ್ಗುಬಡಿಯಲು ನಿರ್ಧರಿಸಿದ. 949 ರಲ್ಲಿ ಚೋಳರಿಗೂ ರಾಷ್ಟ್ರಕೂಟರಿಗೂ ನಡೆದ ಯುದ್ಧದಲ್ಲಿ ಗಂಗರಾಜ ಎರಡನೆಯ ಬೂತುಗ ರಾಷ್ಟ್ರಕೂಟ ದೊರೆ ಮುಮ್ಮಡಿ ಕೃಷ್ಣನ ಪರವಹಿಸಿ, ರಾಜರಾಜ ಚೋಳನ ಸಹೋದರನೂ ಯುವರಾಜನೂ ಆಗಿದ್ದ ಇಮ್ಮಡಿ ಆದಿತ್ಯನನ್ನು ತಕ್ಕೋಲಂ ಎಂಬಲ್ಲಿ ಕೊಂದಿದ್ದ. ಆ ಸೇಡನ್ನು ತೀರಿಸಿಕೊಳ್ಳಲು ನಿರ್ಧರಿಸಿದ ರಾಜರಾಜ 992 ವೇಳೆಗೆ ಗಂಗರನ್ನು ಸೆದೆಬಡಿದು ಗಂಗವಾಡಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ವಶಪಡಿಸಿಕೊಂಡ. ನೊಳಂಬವಾಡಿಯ ಪ್ರದೇಶಗಳೂ ಚೋಳರ ವಶವಾದವು. ಮೈಸೂರಿನ ಪೂರ್ವ ಮತ್ತು ದಕ್ಷಿಣ ಪ್ರದೇಶಗಳನ್ನು ಒಳಗೊಂಡ ಗಂಗವಾಡಿ ಗಂಗರ ಪ್ರಾಂತ್ಯವಾಗಿತ್ತು. ನೊಳಂಬವಾಡಿ ಪ್ರಾಂತ್ಯ ತುಮಕೂರು, ಚಿತ್ರದುರ್ಗ, ಬೆಂಗಳೂರು, ಕೋಲಾರ್, ಸೇಲಂ, ಉತ್ತರ ಆರ್ಕಾಟ್, ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಪ್ರದೇಶಗಳನ್ನು ಒಳಗೊಂಡಿತ್ತು. 1004 ರ ತಿರುಮಕೂಡಲು ನರಸೀಪುರದ ಶಾಸನವೊಂದರ ಪ್ರಕಾರ ಗಂಗವಾಡಿ ಮತ್ತು ನೊಳಂಬವಾಡಿ ಪ್ರಂತ್ಯಗಳ ಜೊತೆಗೆ ವೆಂಗೈನಾಡು (ಪೂರ್ವಚಾಳುಕ್ಯರ ಪ್ರಾಂತ್ಯಗಳು), ಕೊಲ್ಲಂ, ಕಳಿಂದ, ಖಳಮಂಡಳಂ, ಇರ್ಪಾಡಿ ಕುಡುಮಲೈನಾಡು ಮತ್ತು ತಡಿಗೆ ವಾಡಿಗಳು ರಾಜರಾಜನ ವಶವಾಗಿದ್ದವೆಂದು ತಿಳಿಯುತ್ತದೆ. ತಡಿಗೆವಾಡಿ ಇಂದಿನ ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿ, ಮಂಡ್ಯ, ಶ್ರೀರಂಗಪಟ್ಟಣ, ಕೃಷ್ಣರಾಜಪೇಟೆ ತಾಲ್ಲೂಕುಗಳನ್ನು ಒಳಗೊಂಡಿತ್ತು. ಇದೇ ಶಾಸನ ರಾಜರಾಜ ಕುಡುಮಲೈ ನಾಡಿನ ಮೇಲೆ ದಂಡೆತ್ತಿ ಹೋಗಿ ಉದಗೈ ಕೋಟೆಯನ್ನು ಆಕ್ರಮಿಸಿದನೆಂದು ತಿಳಿಸುತ್ತದೆ. ಕುಡುಮಲೈನಾಡು ಇಂದಿನ ಕೊಡಗು ಜಿಲ್ಲೆಯ ಪ್ರದೇಶವೆಂದು ಗುರುತಿಸಲಾಗಿದೆ.

ಈ ಸಮಯದಲ್ಲಿ ಕರ್ನಾಟಕದಲ್ಲಿ ರಾಷ್ಟ್ರಕೂಟರ ಆಳ್ವಿಕೆ ಕೊನೆಗೊಂಡು, ಗಂಗರು ಶಕ್ತಿಹೀನರಾಗಿದ್ದರು; ರಾಜರಾಜನನ್ನು ಎದುರಿಸುವಷ್ಟು ಸಮರ್ಥ ರಾಜರಾರೂ ಇರಲಿಲ್ಲ. ಪರಣಾಮವಾಗಿ ಕರ್ನಾಟಕದ ಈ ಪ್ರಾಂತ್ಯಗಳು ಬಲಿಷ್ಟನಾದ ರಾಜರಾಜನ ಆಕ್ರಮಣಕ್ಕೆ ಸುಲಭವಾಗಿ ಬಲಿಯಾದವು. ಅನಂತರ ಗಂಗರ ರಾಜಧಾನಿಯಾಗಿದ್ದ ತಲಕಾಡನ್ನು ಆಕ್ರಮಿಸುವಂತೆ ತನ್ನ ಮಗ ಯುವರಾಜ ರಾಜೇಂದ್ರನಿಗೆ ಆದೇಶಿಸಿದ. 1004 ರ ವೇಳೆಗೆ ರಾಜೇಂದ್ರ ತಲಕಾಡನ್ನು ವಶಪಡಿಸಿಕೊಂಡು ಗಂಗರಾಜ ರಕ್ಕಸನನ್ನು ಚೋಳರ ಸಾಮಂತನಾಗುವಂತೆ ಮಾಡಿದ. ತಲಕಾಡು ಚೋಳರ ಆಧೀನಕ್ಕೆ ಒಳಪಡುತ್ತಿದ್ದಂತೆಯೇ ಅದಕ್ಕೆ ರಾಜರಾಜಪುರವೆಂದು ನಾಮಕರಣ ಮಾಡಲಾಯಿತು. ಅಲ್ಲಿನ ಗಂಗರ ಅಧೀನ ಅಧಿಕಾರಿಗಳು ಮತ್ತು ಸರದಾರರನ್ನು ಅವರವರ ಹುದ್ದೆಗಳಿಂದ ತೆಗೆದುಹಾಕಿ, ಆ ಹುದ್ದೆಗಳಿಗೆ ಚೋಳಾಧಿಕಾರಿಗಳನ್ನು ನೇಮಿಸಲಾಯಿತು. ಅಪ್ರಮೇಯನ ಜನಸ್ತಂಭದ ಪ್ರಕಾರ 1006 ರಲ್ಲಿ ಗಂಗರು ಮತ್ತು ಅವರ ಸಾಮಂತರಾದ ಹೊಯ್ಸಳರು, ನೊಳಂಬರು, ಶಬರ, ಶಾಂತರ, ಸೇನವಾರ ಮೊದಲಾದ ವಂಶಗಳಿಗೆ ಸೇರಿದ ಸಾಮಂತರಾಜರ ಒಕ್ಕೂಟವು ಗಂಗವಾಡಿಯನ್ನು ಆಕ್ರಮಿಸಿದ್ದ ಚೋಳರನ್ನು ನಿಗ್ರಹಿಸಲು ಪ್ರಯತ್ನಿಸಿ ರಾಜರಾಜನ ದಂಡನಾಯಕ ಅಪ್ರಮೇಯನನ್ನು ತಿರುಮಕೂಡಲು ನರಸೀಪುರದ ಕಲುಯೂರಿನ ಬಳಿಯಲ್ಲಿ ಎದುರಿಸಿ ಸೋತುಹೋಯಿತು. ಹೀಗಿದ್ದರೂ ಈ ಸಣ್ಣಪುಟ್ಟ ರಾಜರ ಒಕ್ಕೂಟ ಕರ್ನಾಟಕದಲ್ಲಿ ವಿಸ್ತಾರಗೊಳ್ಳುತ್ತಿದ್ದ ಚೋಳರ ಪ್ರಾಬಲ್ಯವನ್ನು ತಡೆಯಲು ಒಗ್ಗೂಡಿದ್ದು ಕರ್ನಾಟಕದ ರಾಜಕೀಯದಲ್ಲಿ ಒಂದು ಗಮನಾರ್ಹ ಬೆಳವಣಿಗೆ ಎನ್ನಬಹುದು. ಕಲುಯೂರು ಯುದ್ಧದ ಅನಂತರ ಕರ್ನಾಟಕದ ಗಂಗವಾಡಿ, ರಟ್ಟವಾಡಿ, ಮಲೆನಾಡು, ನೊಳಂಬವಾಡಿ ಮತ್ತು ಕೊಂಗುದೇಶಗಳು ಚೋಳನಡುಗಳಾಗಿ ಪರಿವರ್ತಿತಗೊಂಡವು.

ಆಕ್ರಮಣವೇ ಅತ್ಯುತ್ತಮವಾದ ರಾಜ್ಯ ರಕ್ಷಣೆಯ ಮಾರ್ಗವೆಂದು ಭಾವಿಸಿದ ರಾಜರಾಜ ಆಗತಾನೇ ಪ್ರಾಬಲ್ಯಕ್ಕೆ ಬಂದಿದ್ದ ಕಲ್ಯಾಣ ಚಾಳುಕ್ಯರ ಮೇಲೆ ದಾಳಿ ಮಾಡಿ, ರಟ್ಟವಾಡಿಯನ್ನು ವಶಪಡಿಸಿಕೊಂಡನೆಂದು ಇವನ ಶಾಸನಗಳು ತಿಳಿಸುತ್ತವೆ. ಆದರೆ ಹೊಟ್ಟೂರು ಶಾಸನದ ಪ್ರಕಾರ, ರಾಜರಾಜನ ಮಗ ರಾಜೇಂದ್ರನ ದಂಡನಾಯಕತ್ವದಲ್ಲಿ ಚೋಳರಸೈನ್ಯ ರಟ್ಟವಾಡಿಯನ್ನು ಮುತ್ತಿ ಸ್ತ್ರೀಯರು, ಮಕ್ಕಳು ಮತ್ತು ಬ್ರಾಹ್ಮಣರನ್ನು ವಧೆಮಾಡಿ, ಸುಲಿಗೆ ನಡೆಸಿತೇ ಹೊರತು, ರಟ್ಟವಾಡಿಯ ಯಾವ ಭಾಗಗಳನ್ನೂ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ತಿಳಿದುಬರುತ್ತದೆ. ರಟ್ಟವಾಡಿಯನ್ನು ಮುತ್ತಲು ಪ್ರಯತ್ನಿಸಿದ ರಾಜರಾಜ ಚೋಳನ ಸೈನ್ಯವನ್ನು ಕಲ್ಯಾಣ ಚಾಳುಕ್ಯ ದೊರೆ ಸತ್ಯಾಶ್ರಯ ತಾವರೆಗಟ್ಟ ಎಂಬಲ್ಲಿ ಪರಾಭವಗೊಳಿಸಿದ. ಕೆಲವೇ ದಿನಗಳಲ್ಲಿ ರಾಜರಾಜ ಸುಧಾರಿಸಿಕೊಂಡು, ಪುನ: ಸತ್ಯಾಶ್ರಯವನ್ನು ಸೋಲಿಸಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದು ತಂಜಾವೂರಿಗೆ ಕೊಂಡೊಯ್ದ. ಸತ್ಯಾಶ್ರಯ ತುಂಗಭದ್ರಾ ನದಿಯನ್ನು ತಮ್ಮಿಬ್ಬರ ರಾಜ್ಯಗಳ ಮೇರೆಯನ್ನಾಗಿ ಒಪ್ಪಿಕೊಳ್ಳುವಂತೆ ಮಾಡಿದ. ಕೋಲಾರದ ಶಾಸನವೊಂದರ ಪ್ರಕಾರ ರಾಜರಾಜ ಮಲೆನಾಡಿನ ಕೆಲವು ಪ್ರದೇಶಗಳ ಮೇಲೂ ಅಧಿಕಾರ ಸ್ಥಾಪಿಸಿದಂತೆ ತಿಳಿದುಬರುತ್ತದೆ. 1004 ರ ಶಾಸನವೊಂದರ ಪ್ರಕಾರ ಹುಣಸೂರು ತಾಲ್ಲೂಕು ಮತ್ತು ಕೊಡಗು ಪ್ರದೇಶಗಳನ್ನೊಳಗೊಂಡ ಪ್ರಾಂತ್ಯವನ್ನು ಆಳುತ್ತಿದ್ದ ಚಂಗಾಳ್ವರನ್ನು ಹನಸೋಗೆ ಎಂಬಲ್ಲಿ ಸೋಲಿಸಿ ಅವುಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಗಂಗವಾಡಿಯನ್ನು ವಶಪಡಿಸಿಕೊಳ್ಳಲು ಕರ್ನಾಟಕದ ಸಂಪೂರ್ಣ ಭಾಗಗಳಲ್ಲಿ ತನ್ನ ಅಧಿಕಾರವನ್ನು ಈತ ನೆಲೆಗೊಳಿಸಿದ.

ಇದೇ ಸಂದರ್ಭದಲ್ಲಿ ವೆಂಗಿಮಂಡಲದ (ಆಂಧ್ರದ) ಚಾಳುಕ್ಯರಲ್ಲಿ ಸಿಂಹಾಸನಕ್ಕಾಗಿ ಅಂತರ್ಯುದ್ಧ ಪ್ರಾರಂಭವಾಗಿತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ರಾಜರಾಜ ವೆಂಗಿಮಂಡಲದ ಮೇಲೆ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದ. ಇವನು ಚೋಳರ ಪ್ರಾಬಲ್ಯಕ್ಕೆ ತೊಡಕಾಗಿದ್ದ ಕಲ್ಯಾಣ ಚಾಲುಕ್ಯರ ಪ್ರಭಾವ ತಗ್ಗಿಸಲು ಸಿಂಹಾಸನವನ್ನು ಕಳೆದುಕೊಂಡಿದ್ದ ವೆಂಗಿಯ ರಾಜಕುಮಾರ ಶಕ್ತಿವರ್ಮ ಮತ್ತು ವಿಮಲಾದಿತ್ಯರಿಗೆ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದ. ಕೆಲವು ದಿನಗಳ ಅನಂತರ ಶಕ್ತಿವರ್ಮನಿಗೆ ವೆಂಗಿಯ ಸಿಂಹಾಸನವನ್ನು ದೊರಕಿಸಿಕೊಟ್ಟು, ಅವನ ಸೋದರ ವಿಮಲಾದಿತ್ಯನಿಗೆ ತನ್ನ ಮಗಳು ಕುಂದವ್ವೆಯನ್ನು ನೀಡಿ ವೈವಾಹಿಕ ಸಂಬಂಧವೇರ್ಪಡಿಸಿಕೊಂಡ. ಅನಂತರ ಶಕ್ತಿವರ್ಮ ಚೋಳರ ಸಾಮಂತನಾಗಿ ಮುಂದುವರಿದ. ಇವರ ಸಹಕಾರದಿಂದ ರಾಜರಾಜ ಕಳಿಂದ ಮತ್ತು ಮಾಲ್ಡೀವ್ ದ್ವೀಪಗಳನ್ನು ವಶಪಡಿಸಿಕೊಂಡ. ತಮಿಳುನಾಡಿನಿಂದ ಕೇರಳದ ವರೆಗೂ ಕರ್ನಾಟಕದ ತುಂಗಭದ್ರಾ ಪ್ರದೇಶದಿಂದ ಆಂಧ್ರದ ವರೆಗೂ ಹಾಗೂ ಸಿಂಹಳದ ಉತ್ತರಭಾಗ ಮತ್ತು ಮಾಲ್ಡೀವ್ ದ್ವೀಪಗಳವರೆಗೂ ಈತನ ಸಾಮ್ರಾಜ್ಯ ಹಬ್ಬಿತು.

ಪರಾಕ್ರಮಿಯೂ ಸಮರ್ಥನೂ ಎನಿಸಿದ ರಾಜರಾಜ ಸಾಮ್ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಜಾರಿಗೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಚೋಳರ ಕೀರ್ತಿ ಪ್ರಜ್ಜ್ವಲಿಸುವಂತೆ ಮಾಡಿದ. ಆಡಳಿತದ ಅನುಕೂಲತೆಯ ದೃಷ್ಟಿಯಿಂದ ರಾಜ್ಯವನ್ನು ಹಲವು ಮಂಡಲಗಳನ್ನಾಗಿ ವಿಂಗಡಿಸಲಾಗಿತ್ತು. ಸ್ಥಳೀಯ ಸಂಸ್ಥೆಗಳ ಸ್ವಯಂ ಆಡಳಿತಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ.
ಪರಮತ ಸಹಿಷ್ಣುವಾಗಿದ್ದ ಈತ ಸಾಹಿತ್ಯ, ಕಲೆ ಮತ್ತು ಧರ್ಮಗಳಿಗೆ ಮುಕ್ತವಾಗಿ ಪ್ರೋತ್ಸಾಹ ನೀಡಿದ. ಕಲಾಭಿಮಾನಿಯಾದ ಈತ ಅನೇಕ ದೇವಾಲಯಗಳನ್ನು ಕಟ್ಟಿಸಿದ. ಅವುಗಳಲ್ಲಿ ತಂಜಾವೂರಿನ ಬೃಹದೇಶ್ವರ ದೇವಾಲಯ ಸುಪ್ರಸಿದ್ಧವಾದುದು. ಕಲಾಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಈ ದೇವಾಲಯ ರಾಜರಾಜನ ಮಹಾಸಾಧನೆಯ ಪ್ರತೀಕವಾಗಿ ನಿಂತಿದೆ. ಕೃಷಿಯನ್ನು ಅಭಿವೃದ್ಧಿ ಪಡಿಸಲು ಕೆರೆಕಟ್ಟೆಗಳನ್ನು ನಿರ್ಮಿಸಿದ. ಭೂಮಿಯ ಫಲವತ್ತತೆಗೆ ಅನುಗುಣವಾಗಿ ಅದನ್ನು ವಿಂಗಡಿಸಿ, ಕಂದಾಯ ನಿಗದಿಗೊಳಿಸಿದ. ರಾಜ್ಯದ ಭದ್ರತೆಗಾಗಿ ಸುಸಜ್ಜಿತವಾದ ಸೈನ್ಯಪಡೆ ಮತ್ತು ನೌಕಾಪಡೆಗಳನ್ನು ವ್ಯವಸ್ಥೆಗೊಳಿಸಿದ.

ರಾಜರಾಜ ತನ್ನ ಇಷ್ಟೆಲ್ಲ ಸಾಧನೆಗಳ ಕುರುಹಾಗಿ ಅನೇಕ ಬಿರುದು ಬಾವಲಿಗಳನ್ನು ಹೊಂದಿದ್ದ. ಇವನಿಗೆ ಚೋಳೇಂದ್ರಸಿಂಹ, ಚೋಳಮಾರ್ತಾಂಡ, ಜಯಗೊಂಡಚೋಳ, ಕೇರಳಾಂತಕ, ಪಾಂಡ್ಯಕುಲಾಳಿನಿ, ಸಿಂಹಳಾಂತಕ, ಶಿವಪಾದಶೇಖರ, ರಾಜಾಶ್ರಯ, ತೆಲಿಂಗಕುಲಕಾಲ, ಕ್ಷತ್ರಿಯಶಿಖಾಮಣಿ, ಕವಿಕುಲಮಾಣಿಕ್ಯ, ಕವಿರಾಜ-ಕೇಸರಿಪನ್ನಾರ್ ಮುಂತಾದ ಹಲವು ಬಿರುದುಗಳಿದ್ದವು. ಈತನಿಗೆ ಲೋಕಮಹಾದೇವಿ, ಪಂಚವನ್ ಮಹಾದೇವಿ, ಅಭಿಮಾನವಲ್ಲಿ, ಲತಾಮಹಾದೇವಿ, ಪಥಿü್ವೀಮಹಾದೇವಿ ಎಂಬ ಅನೇಕ ರಾಣಿಯರಿದ್ದರು. ಇವರಲ್ಲಿ ಲೋಕ ಮಹಾದೇವಿ ಪಟ್ಟದ ಅರಸಿಯಾಗಿದ್ದಳು. ಇವರು ದಾನದತ್ತಿಗಳನ್ನು ನೀಡುವ ಮೂಲಕ ರಾಜನ ಧಾರ್ಮಿಕ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ರಾಜರಾಜನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಗ ರಾಜೇಂದ್ರ ಆಡಳಿತದಲ್ಲಿ ಪಾಲ್ಗೊಂಡ. 1012 ರಲ್ಲಿ ರಾಜರಾಜ ಆತನನ್ನು ಯುವರಾಜನೆಂದು ನೇಮಿಸಿದ.

ರಾಜರಾಜ ಚೋಳ ಸಾಮ್ರಾಜ್ಯಕ್ಕೆ ತಳಪಾಯ ಹಾಕಿ 1014 ರಲ್ಲಿ ಮರಣ ಹೊಂದಿದ. ಅನಂತರ ಇವನ ಮಗ ಪರಾಕೇಸರಿವರ್ಮ ರಾಜೇಂದ್ರ ಚೋಳ ಅಧಿಕಾರಕ್ಕೆ ಬಂದ.  				          
 (ಎಂ.ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ